ಅಪರಾಧಶಾಸ್ತ್ರ
	
ಅಪರಾಧ ಅಥವಾ ದುರ್ವರ್ತನೆಗೆ ಸಂಬಂಧಿಸಿದ ವಿಚಾರಗಳ ಶಾಸ್ತ್ರೀಯ ಸಮೀಕ್ಷಣೆ (ಕ್ರಿಮಿನಾಲಜಿ). ಈ ಶಾಸ್ತ್ರದ ಮೂಲ ಉದ್ದೇಶ ದುರ್ವರ್ತನೆಗೆ ಕಾರಣ ಹಾಗೂ ಅದರ ಸೂಕ್ತ ಪರಿಹಾರೋಪಾಯಗಳನ್ನು ಕಂಡುಹಿಡಿಯುವದೇ ಆಗಿದೆ. ಸೆರೆಸಿಕ್ಕಿದ ಅಪರಾಧಿಗೆ ಯಾವ ಶಿಕ್ಷೆ ವಿಧಿಸಬೇಕು, ಯಾವ ರಿತಿ ನಡೆಸಿಕೊಳ್ಳಬೇಕು, ಅವನನ್ನು ಮತ್ತೆ ಸಮಾಜದಲ್ಲಿ ಪ್ರತಿಷ್ಠಿತನನ್ನಾಗಿ ಮಾಡಲು ಏನು ಮಾಡಬೇಕು ಎಂಬ ಜಿಜ್ಞಾಸೆಗೆ ಸಂಬಂಧಿಸಿದ್ದರೂ ಇದು ಈ ಶಾಸ್ತ್ರದ ಉಪಶಾಖೆಯಾದ ದಂಡನಶಾಸ್ತ್ರಕ್ಕೆ (ಪೀನಾಲಜಿ) ಸಂಬಂಧಿಸಿದೆ.
	
ಕಾನೂನಿಗೆ ವಿರುದ್ಧವಾದ ನಡತೆಯೇ ಅಪರಾಧ. ಇದು ಎಲ್ಲ ದೇಶ ಎಲ್ಲ ಕಾಲಗಳಲ್ಲಿ ಕಾಣುವ ವಿಷಯ. ಮಾನವ ವ್ಯವಸ್ಥಿತಜೀವನವನ್ನು ಎಂದಿನಿಂದ ನಡೆಸಲು ಆರಂಭಿಸಿದನೋ ಅಂದಿನಿಂದಲೂ ಇಂಥ ವರ್ತನೆಗೆ ಕಾರಣಗಳನ್ನು ಹುಡುಕುತ್ತಿದ್ದಾನೆ. ಆದರೂ ಇದರ ಶಾಸ್ತ್ರೀಯ ವಿಶ್ಲೇಷಣೆ ಪ್ರಾರಂಭವಾದದ್ದು ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ.
	
ಅಪರಾಧಗಳನ್ನು ವೈಜ್ಞಾನಿಕ ವಿಧಾನಗಳಿಂದ ಸಮೀಕ್ಷಿಸಲು ಯತ್ನಿಸಿದ ಮೊದಮೊದಲಿನ ವಿದ್ವಾಂಸರಲ್ಲಿ ಇಟಲಿಯ ವೈದ್ಯ ಹಾಗೂ ಮಾನವಶಾಸ್ತ್ರಜ್ಞನಾದ ಸೆಸಾರ್ ಲೋಂಬ್ರೋಸೊ ಮುಖ್ಯನಾಗಿದ್ದಾನೆ. 1876 ರಲ್ಲಿ ಪ್ರಕಟವಾದ ಆತನ ಯೊಮೊ ಡೆಲಿನ್‍ಕ್ವೆಂಡೆ (ಅಪರಾಧಿ ಮಾನವ) ಗ್ರಂಥ ಅಪರಾಧಶಾಸ್ತ್ರಗ್ರಂಥಗಳಲ್ಲಿ ಮೊಟ್ಟಮೊದಲನೆಯದೆಂದು ಭಾವಿಸಲಾಗಿದೆ. ಈ ಶಾಸ್ತ್ರವ್ಯಾಸಂಗದ ಮೇಲೆ ಆ ಗ್ರಂಥ ಬೀರಿದ ಪರಿಣಾಮ ಕ್ರಾಂತಿಕಾರಕವಾಗಿತ್ತು. ಲೋಂಬ್ರೋಸೊ ಮಾನವ ಶಾಸ್ತ್ರೀಯಮಾನಗಳನ್ನೂ ಸುವ್ಯವಸ್ಥಿತ ಸಮೀಕ್ಷಣ ವಿಧಾನವನ್ನೂ ಉಪಯೋಗಿಸಿಕೊಂಡು ಒಂದು ಸಿದ್ಧಾಂತಕ್ಕೆ ಬಂದ. ಮನುಷ್ಯನ ಕೇಡಿಗತನ ಹುಟ್ಟಿನಿಂದ ಬಂದದ್ದು. ಆತ ನಾಗರಿಕರ ಮಧ್ಯೆ ಇರುವ ಅನಾಗರಿಕ, ಕಾಡುಮನುಷ್ಯ. ಆತನ ದೇಹದಲ್ಲೂ ಮನಸ್ಸಿನಲ್ಲೂ ಕೆಲವು ಕಳಂಕದ ಕರೆಗಳು ಇದ್ದುಕೊಂಡು ಆತ ಇಂಥವನೆಂಬುದನ್ನು ತೋರಿಕೊಡುತ್ತವೆ-ಇದನ್ನು ಯಥಾರ್ಥವಾದವೆಂದು ಪರಿಗಣಿಸಲಾಗಿದೆ.
	
ಕೆಲವು ಕಾಲದವರೆಗೆ ಬಹುಜನಸಮ್ಮತಿಯನ್ನು ಪಡೆದಿದ್ದ ಈ ಸಿದ್ಧಾಂತವನ್ನು ಆತನ ಸಮಕಾಲೀನ ಫ್ರೆಂಚ್ ಸಮಾಜಮನಶ್ಶಾಸ್ತ್ರಜ್ಞ ಹಾಗೂ ನ್ಯಾಯಶಾಸ್ತ್ರಜ್ಞನಾದ ಗೇಬ್ರಿಯಲ್ ಟಾರ್ಡೆ ತನ್ನ ಪೀನಲ್ ಫಿಲಾಸಫಿ (ದಂಡನಾತತ್ತ್ವ) ಎಂಬ ಗ್ರಂಥದಲ್ಲಿ ಅಲ್ಲಗಳೆದ. ಅದಕ್ಕೆ ಪ್ರತಿಯಾಗಿ ಟಾರ್ಡೆ ಅಪರಾಧ ಮಿಕ್ಕೆಲ್ಲ ವೃತ್ತಿಗಳ ಹಾಗೆ ಒಂದು ವೃತ್ತಿ, ಹೀಗಿರುವುದರಿಂದ ಅದು ಮಿಕ್ಕ ಕಸಬುಗಳಂತೆ ಉಮೇದುವಾರರನ್ನು ತನ್ನತ್ತ ಸೆಳೆಯುತ್ತದೆ ಎಂಬ ತನ್ನ ವಾದವನ್ನು ಮುಂದಿಟ್ಟ.. ಟಾರ್ಡೆಯ ಪ್ರಕಾರ ಕೇಡಿಗತನ ಅನುಕರಣೆಯಿಂದ ಹುಟ್ಟಿಕೊಳ್ಳುತ್ತದೆ. ತನ್ನ ಪರಿಸರದಲ್ಲಿ ಕಂಡುಬರುವ ದುರ್ವರ್ತನೆಗಳನ್ನು ಅನುಕರಿಸುತ್ತಾನಾದ ಕಾರಣ ಮನುಷ್ಯ ಕೇಡಿಗನಾಗುತ್ತಾನೆ. ಆದುದರಿಂದ ಕೇಡಿಗತನ ಭೌತಿಕ ಅಥವಾ ಜೈವಿಕಕಾರಣಗಳಿಗಿಂತಲೂ ಹೆಚ್ಚಾಗಿ ಸಾಮಾಜಿಕ ಕಾರಣಗಳಿಂದ ಉದ್ಭವಿಸುತ್ತದೆ.
	
ಆದರೆ, ಹುಟ್ಟಿನಿಂದಲೇ ಕೇಡಿಗ ಎಂಬ ಲೋಂಬ್ರೋಸೊವಿನ ಸಿದ್ಧಾಂತ ಆಧಾರ ರಹಿತವಾದುದೆಂದು ಪರಿಣಾಮಕಾರಿಯಾಗಿ ಪ್ರಥಮತಃ ತೋರಿಸಿ ಕೊಟ್ಟವ ಚಾರಲ್ಸ್ ಗೋರಿಂಗ್ ಎಂಬ ಇಂಗ್ಲಿಷ್ ವೈದ್ಯ. ಈತ ಮೂರುಸಾವಿರ ಅಪರಾಧಿಗಳನ್ನು ಬಹು ಕಷ್ಟಪಟ್ಟು ಪರೀಕ್ಷಿಸಿ 1913ರಲ್ಲಿ ಒಂದು ಗ್ರಂಥವನ್ನು ಪ್ರಕಟಿಸಿದ. ಆದರೆ ಕೇಡಿಗನ ನಡತೆಗೊಂದು ಕಾರಣವನ್ನು ಹುಡುಕುತ್ತ ಗೋರಿಂಗ್ ದುರ್ವರ್ತನಕ್ಕೆ ಮುಖ್ಯ ಕಾರಣ ಮಂದಬುದ್ಧಿ ಎಂಬ ಸಿದ್ಧಾಂತಕ್ಕೆ ಬಂದ. ಈ ತೆರದಲ್ಲಿ ದುರ್ನಡತೆಯನ್ನು ವಿವರಿಸಲು ಮಂದಬುದ್ಧಿಯ ಜಾಡನ್ನು ಹಿಡಿಯುವ ಪ್ರವೃತ್ತಿ ಈತನಿಂದ ಮೊದಲಿಟ್ಟಿತ್ತು. ಮಂದಬುದ್ಧಿ ದುರ್ವರ್ತನೆಗೆ ಮುಖ್ಯಕಾರಣವೆಂಬ ಸಿದ್ಧಾಂತವನ್ನು ಎತ್ತಿ ಹಿಡಿದ ಪ್ರಮುಖರಲ್ಲಿ ಅಮೆರಿಕದ ಮನಶ್ಶಾಸ್ತ್ರಜ್ಞ ಹೆನ್ರಿ ಎಚ್. ಗೊಡ್ಡಾರ್ಡ್ ಒಬ್ಬ. ಬಾಲಾಪರಾಧಿಗಳನ್ನು ತಿದ್ದುವ ಹಲವಾರು ಸೆರೆಮನೆಗಳಲ್ಲಿನ ಮಕ್ಕಳ ವಿಚಾರದಲ್ಲಿ ಮನೋಮಾನಕ ಪರೀಕ್ಷೆಗಳನ್ನು ನಡೆಸಿ ಅವುಗಳ ಫಲಿತಾಂಶಗಳನ್ನು ಒಟ್ಟುಗೂಡಿಸಿ ಗೊಡ್ಡಾರ್ಡ್ ತನ್ನ ಫೀಬಲ್ ಮೈಂಡೆಡ್‍ನೆಸ್ : ಇಟ್ಸ್‍ಕಾಸಸ್ ಅಂಡ್ ಕಾನ್ಸೆಕ್ವೆನ್ಸಸ್ (ಮಂದಬುದ್ಧಿತ್ವ: ಅದರ ಕಾರಣಗಳು ಮತ್ತು ಪರಿಣಾಮಗಳು) ಗ್ರಂಥದಲ್ಲಿ ಕೆಳಮಟ್ಟದ ಬುದ್ಧಿ ದುರ್ನಡತೆಗೆ ಅತ್ಯಂತ ಪ್ರಧಾನವಾದ ಏಕೈಕ ಕಾರಣವೆಂಬುದನ್ನು ನಿಸ್ಸಂದೇಹವಾಗಿ ಸಮೀಕ್ಷಣೆಗೆ ತೋರಿಸಿಕೊಡುತ್ತವೆ ಎಂದು ಸಾರಿದ. ಆದರೆ ಮುಂದೆ ಇದಕ್ಕೆ ವಿರುದ್ಧವಾದ ಅನೇಕ ಫಲಿತಾಂಶಗಳನ್ನು ಒಟ್ಟುಗೂಡಿಸಲಾಯಿತು. ಇದರಿಂದ ಕೇಡಿಗನಲ್ಲದವನಿಗಿಂತ ಕೇಡಿಗ ಕೆಳಮಟ್ಟದವ ಮಂದಬುದ್ಧಿಯವ ಎಂಬ ಸಿದ್ಧಾಂತಕ್ಕೆ ನೆಲೆ ತಪ್ಪಿತು.
	
ಅಪರಾಧಿಗಳ ಬುದ್ಧಿಯ ಮಟ್ಟವನ್ನು ಕುರಿತು ಅತ್ಯಂತ ವಿಸ್ತøತವಾದ ಸಮೀಕ್ಷಣೆಯನ್ನು ಕಾರಲ್ ಮರ್‍ಚೆಸನ್ ಎಂಬ ಮತ್ತೊಬ್ಬ ಅಮೆರಿಕದ ಮನಶ್ಶಾಸ್ತ್ರಜ್ಞ ನಡೆಸಿ ತನ್ನ ಕ್ರಿಮಿನಲ್ ಇನ್‍ಟೆಲಿಜೆನ್ಸ್ (ಕೇಡಿಗಬುದ್ಧಿ) ಎಂಬ ಗ್ರಂಥವನ್ನು ರಚಿಸಿದ. ರಾಜ್ಯದ ಅನೇಕ ಸೆರೆಮನೆಗಳು ಮತ್ತು ಸುಧಾರಣಾಗೃಹಗಳಲ್ಲಿನ ಜನರನ್ನು ಸಂಯುಕ್ತ ಸಂಸ್ಥಾನ ಸೈನ್ಯದ ಆಲ್ಫ್ ಪರೀಕ್ಷೆಗೆ ಒಳಪಡಿಸಿದಾಗ ಆ ದೇಶದ ಸಹಾಯಕ ಸೇನಾದಳದ ಜನರಿಗಿಂತಲೂ ಈ ಸೆರೆಯಾಳುಗಳ ಬುದ್ಧಿ ಸರಾಸರಿ ಲೆಕ್ಕದಲ್ಲಿ ಹೆಚ್ಚಿನ ಮಟ್ಟದಲ್ಲಿದ್ದು ಬುದ್ಧಿಯ ದರ್ಜೆವಾರು ವಿಂಗಡಣೆಯಲ್ಲಿ ಅವರ ಸಂಖ್ಯೆ ಏರುಮಟ್ಟದಲ್ಲಿತ್ತೆಂಬುದನ್ನು ಕಂಡುಕೊಂಡ. ಇನ್ನೂ ಮುಂದೆ ನಡೆಸಿದ ಸಮೀಕ್ಷೆಗಳಿಂದ ಮಂದಬುದ್ಧಿಗೂ ದುರ್ವರ್ತನೆಗೂ ಕಾರ್ಯಕಾರಣಸಂಬಂಧವೇನಾದರೂ ಇದ್ದರೆ ಅದು ಅತ್ಯಲ್ಪಪ್ರಯಾಣದ್ದೆಂಬ ಅಂಶ ಹೊರಪಟ್ಟಿತು. ದಂಡನಗೃಹದಲ್ಲಿರುವ ಅಪರಾಧಿಯೊಬ್ಬ ಮಂದಬುದ್ಧಿಯವನೆಂದು ಕಾಣಬಂದರೆ ಆ ಮಂದಪ್ರಜ್ಞೆಯ ಮನಸ್ಥಿತಿಯೇ ಅಪರಾಧಕ್ಕೆ ಕಾರಣವಾಯಿತೆಂಬ ಭಾವನೆ ನಿರಾಧಾರವಾದದ್ದು. ಒಂದು ವೇಳೆ ಇಂಥ ಸಂಬಂಧವೊಂದು ಇದ್ದರೆ ಅದು ಆತನ ನಡವಳಿಕೆಯ ದಾಖಲೆಗಳಿಂದ ಸಿದ್ಧವಾಗಬೇಕು. ಇಲ್ಲದಿದ್ದರೆ. ಮಾನಸಿಕವಲ್ಲದ ಇತರ ಕಾರಣUಳೂ ಈ ಅಪರಾಧಪ್ರಚೋದನೆಯಲ್ಲಿ ಸೇರಿಕೊಂಡಿವೆಯೆಂದು ಭಾವಿಸುವುದು ನ್ಯಾಯವಾಗುತ್ತದೆ.
	
ಬುದ್ಧಿಮಾಂದ್ಯ ಅಥವಾ ಮನೋದೌರ್ಬಲ್ಯ ಸ್ವಭಾವತಃ ದುರ್ವರ್ತನೆಗೆ ದಾರಿಮಾಡಿಕೊಡಬೇಕೆಂಬ ಯಾವ ರೀತಿಯ ನಿರ್ಬಂಧವೂ ಕಂಡುಬರುವುದಿಲ್ಲ. ವಸ್ತುತಃ ಮಂದಬುದ್ಧಿಯ ಬಹುಜನಗಳು ಪ್ರಾಯಶಃ ನ್ಯಾಯದ ಕೋಟಲೆಗೆ ಸಿಕ್ಕಿಹಾಕಿಕೊಳ್ಳದಿರುವುದನ್ನು ನೋಡಿದರೆ, ಈ ವಾದಕ್ಕೆ ಯಾವ ಪುಷ್ಟಿಯೂ ದೊರೆಯದು.
	
ಇದೇ ಪ್ರಕಾರವಾಗಿ, ಪ್ರಬಲಮನೋರೋಗ (ಸೈಕೋಸಿಸ್), ನರವ್ಯಾಧಿ (ನ್ಯೂರೋಸಿಸ್) ಮುಂತಾದ ವಿಕಾರಗಳು ದುರ್ನಡತೆಗೆ ಕಾರಣಗಳೆಂಬ ಬಹುಜನರ ನಂಬಿಕೆಗೆ ಯಾವ ಆಧಾರವೂ ಇಲ್ಲ. ನಾಡೊಟ್ಟಿನ ಜನತೆ ಬೆಚ್ಚಿ ಬೀಳುವಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಪರಾಧಿಗಳು ಇಂಥ ಪ್ರಬಲ ರೋಗಗಳಿಂದ ಪೀಡಿತರಾಗಿದ್ದಾರೆಂಬುದನ್ನು ತೋರಿಸುವುದಕ್ಕಾಗುವುದಿಲ್ಲ. ಮನೋರೋಗ ಚಿಕಿತ್ಸೆ ಅಥವಾ ಮನೋಮಾನಕ ರೂಪದ ಪರೀಕ್ಷೆಗಳನ್ನು ನ್ಯೂಯಾರ್ಕ್ ನಗರದ ಜನರಲ್ ಸೆಷನ್ಸ್ ಕೋರ್ಟಿನ ಸಾವಿರಾರು ಪಾತಕಿಗಳ ವಿಚಾರದಲ್ಲಿ ಹಲವು ವರ್ಷಗಳ ಕಾಲ ನಡೆಸಿ ನೋಡುವಲ್ಲಿ, ಆ ಪೈಕಿ ಎಲ್ಲೋ ಸ್ವಲ್ಪಜನ ಮಾತ್ರ ಪ್ರಬಲಮನೋರೋಗಾದಿ ವ್ಯಾಧಿಗಳಿಂದ ಪೀಡಿತರು ಅಥವಾ ದುರ್ಬಲವಾದ ಮನಸ್ಸುಳ್ಳವರು ಎಂಬುದು ವ್ಯಕ್ತವಾಯಿತು. ಸರಾಸರಿ ಲೆಕ್ಕದಲ್ಲಿ ಈ ವ್ಯಾಧಿ ಮತ್ತು ದೌರ್ಬಲ್ಯಗಳು ಸಾಮಾನ್ಯಜನರಲ್ಲಿ ಕಂಡು ಬರುವ ಪ್ರಮಾಣಕ್ಕಿಂತ ಹೆಚ್ಚಿನ ಅಳತೆಯಲ್ಲಿ ಈ ಪಾತಕಿಗಳಲ್ಲಿ ಕಂಡು ಬರಲಿಲ್ಲ. ಎಚ್.ಡಬ್ಲ್ಯು. ಡನ್‍ಹಾಂ ಎಂಬ ಅಮೆರಿಕದ ಸಮಾಜವಿಜ್ಞಾನಿ ಇಲ್ಲಿನಾಯ್ ಎಂಬಲ್ಲಿನ ಅಪರಾಧಿಗಳನ್ನು ಪರೀಕ್ಷಿಸಿ ಇದೇ ಸಿದ್ಧಾಂತಕ್ಕೆ ಬಂದ. ಇಲ್ಲಿನಾಯ್‍ನ ಅಪರಾಧೀಮತಿವಿಕಲರಿಗಾಗಿ ಏರ್ಪಟ್ಟಿರುವ ಸೆಕ್ಯೂರಿಟಿ ಆಸ್ಪತ್ರೆಯಲ್ಲಿನ ಹುಚ್ಚರ ಪೈಕಿ 1.7% ಭಾಗದಷ್ಟು ಜನ ಮಾತ್ರ ಮಹಾಪರಾಧಗಳನ್ನು ಮಾಡಿದವರಾಗಿದ್ದರು ಮತ್ತು ಇಲ್ಲಿನಾಯ್‍ನ ದಂಡನಾಗಾರಕ್ಕೆ ಕಳಿಸಿದ ಅಪರಾಧಿಗಳ ಪೈಕಿ 1.3% ಭಾಗ ಮಾತ್ರ ಹುಚ್ಚರಾಗಿದ್ದರು. ಅಂದರೆ ಹುಚ್ಚರೆಂದು ಪರಿಗಣಿಸಲ್ಪಟ್ಟವರಲ್ಲಿ ಅಪರಾಧಿಗಳು ತೀರ ಕಡಿಮೆ; ಅಪರಾಧಿಗಳ ಪೈಕಿ ಹುಚ್ಚರೂ ಕಡಿಮೆ.
	
ಕೇಡಿಗತನ ಅಥವಾ ದುಷ್ಟಪ್ರವೃತ್ತಿ ಆನುವಂಶಿಕವಾದುದೆಂಬುದು ಜನರಲ್ಲಿ ಹರಡಿರುವ ಮತ್ತೊಂದು ನಂಬಿಕೆ. ಅಮೆರಿಕದ ಮನಶ್ಶಾಸ್ತ್ರಜ್ಞ ಆರ್.ಎಲ್. ಡಗ್‍ಡೇಲ್ ಮತ್ತು ಹಿಂದೆ ಪ್ರಸ್ತಾಪಿಸಿರುವ ಹೆನ್ರಿ ಎಚ್. ಗೊಡ್ಡಾರ್ಡ್ ಎಂಬ ವಿದ್ವಾಂಸರು ಈ ನಂಬಿಕೆಯನ್ನು ನಿಜವೆನಿಸುವುದಕ್ಕೆ ಎರಡು ಪ್ರಖ್ಯಾತ ಸಮೀಕ್ಷಣೆಗಳನ್ನು ನಡೆಸಿದರು. ದಿ ಜೂಕ್ಸ್ ಎಂಬ ತನ್ನ ಸಮೀಕ್ಷಣೆಯಲ್ಲಿ ಡಗ್‍ಡೇಲ್ ಕುಖ್ಯಾತ ದುಷ್ಕುಲಗಳ ಸಂತತಿಯವರನ್ನು ಪರೀಕ್ಷಿಸಿದನಲ್ಲದೆ ಬಹಳ ಹಿಂದಿನ ತಲೆಯವರ ತನಕ ಹೋಗಿ ಅವರು ಉದ್ದಕ್ಕೂ ತೀವ್ರವಾದ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ತಂದೊಡ್ಡಿರುವುದನ್ನು ಕಂಡುಕೊಂಡ; ಅಪರಾಧ. ದುರ್ನಡತೆ, ವ್ಯಭಿಚಾರ ಮುಂತಾದುವನ್ನು ಒಳಗೊಂಡಿರುವ ಈ ದುಷ್ಟಚಾಳಿಗಳು ವಂಶಪಾರಂಪರ್ಯವಾಗಿ ಇಳಿದು ಬಂದಿವೆ ಎಂಬ ಸಿದ್ಧಾಂತಕ್ಕೆ ಬಂದ. ದಿ ಕಲ್ಲಿಕಕ್ ಫ್ಯಾಮಿಲಿ ಎಂಬ ತನ್ನ ನಿಬಂಧದಲ್ಲಿ ಗೊಡ್ಡಾರ್ಡ್ ಇದೇ ನಮೂನೆಯನ್ನು ಅನುಸರಿಸಿದ. ಅನೇಕ ವಿಧದ ತಕರಾರುಗಳಿಂದ ಕೂಡಿದ ಈ ಕುಟುಂಬವನ್ನು ಬಹಳ ಹಿಂದಿನ ತಲೆಮಾರುಗಳವರೆಗೂ ಶೋಧಿಸಿ ನೋಡಿ ದುರ್ಬಲಮನಸ್ಸಿನ ಮೂಲ ಪುರುಷನೊಬ್ಬನಿಂದ ವಂಶಪಾರಂಪರ್ಯವಾಗಿ ಹರಿದುಬಂದ ಕೆಲವು ನ್ಯೂನತೆಗಳ ಎಳೆಗಳು, ಅದರಲ್ಲೂ ಮುಖ್ಯವಾಗಿ ದುರ್ಬಲಮನಸ್ಸು ಇದಕ್ಕೆ ಕಾರಣವೆಂಬುದನ್ನು ಕಂಡುಹಿಡಿದ.
	
ಈ ವ್ಯಾಸಂಗಗಳು ಮೊದಮೊದಲು ವಿಶ್ವಾಸಾರ್ಹವೆನಿಸಿ ತುಂಬ ಪ್ರಾಚೀನ ಸಮಸ್ಯೆಗಳಾದ ಕೇಡಿಗತನ ಮತ್ತು ಇತರ ಅನೀತಿವರ್ತನೆಗಳಿಗೆ ಸದುತ್ತರವನ್ನು ಕೊಡುವಂಥವೆಂದು ಪರಿಗಣಿತವಾದರೂ ಈ ವಿಧಾನಗಳ ತಳಹದಿ ಅಪ್ಪಟವಲ್ಲವೆಂದೂ ಇವುಗಳಲ್ಲಿ ನ್ಯೂನತೆಗಳು ಬಹಳ ಇವೆಯೆಂದೂ ಈಚೆಗೆ ಕಂಡು ಬಂದಿರುವುದರಿಂದ ಇವುಗಳ ಮೇಲಿನ ತೀರ್ಮಾನಗಳು ಕೂಡ ಅಷ್ಟು ಪ್ರಾಮಾಣಿಕವಲ್ಲವೆಂದು ತೋರುತ್ತಿದೆ. ಕುಟುಂಬಗಳಲ್ಲಿದ್ದುವೆಂದು ಭಾವಿಸಲಾದ ಅನೇಕ ದುರ್ನೀತಿಗಳಿಗೆ ಆ ಕುಟುಂಬದವರು ಬಾಳಬೇಕಾಗಿದ್ದ ಅನಾನುಕೂಲ ಸಾಮಾಜಿಕಪರಿಸರವೇ ಕಾರಣವೆಂದು ತೋರಿಸಿಕೊಡಬಹುದಾಗಿತ್ತು. ಈಗ ಈ ವ್ಯಾಸಂಗಗಳು ಐತಿಹಾಸಿಕ ದೃಷ್ಟಿಯಿಂದ ಗಮನಾರ್ಹವಾಗಿವೆಯೇ ಹೊರತು ಮತ್ತೇನೂ ಅಲ್ಲ. ಇದೇ ರೀತಿ ಸಮಾನರೂಪ ಗುಣಗಳನ್ನುಳ್ಳ ಅವಳಿಜವಳಿ ಮಕ್ಕಳಲ್ಲಿ ಮತ್ತು ಅಂಥ ಸಾಮ್ಯವಿಲ್ಲದ ಅವಳಿ ಮಕ್ಕಳಲ್ಲಿ ಕಂಡುಬರುವ ದುರ್ವರ್ತನೆಗೆ ವಂಶಪಾರಂಪರ್ಯವಾದ ಕಾರಣಗಳನ್ನು ಹುಡುಕಲು ಅನೇಕ ಪ್ರಯೋಗಗಳನ್ನು ನಡೆಸಲಾಯಿತು. ಆದರೆ ಇವುಗಳಿಂದ ಈ ಸಿದ್ಧಾಂತವನ್ನು ಸಮರ್ಥಿಸುವ ಸರಿಯಾದ ಸಾಕ್ಷ್ಯಗಳು ದೊರೆಯಲಿಲ್ಲ.
	
ದುರ್ವರ್ತನೆಯನ್ನು ಸಕಾರಣವಾಗಿ ವಿವರಿಸಲೆಳಸುವ ಅನೇಕ ಸಿದ್ಧಾಂತಗಳ ಪೈಕಿ ಆರ್ಥಿಕ ಸಿದ್ಧಾಂತವೂ ಒಂದು. ಮಾಕ್ರ್ಸ್ ತತ್ತ್ವಾನುಯಾಯಿಗಳು ಇದನ್ನು ಸ್ವತಸ್ಸಿದ್ಧವೆಂದು ಭಾವಿಸುತ್ತಾರೆ. ಈ ಸಿದ್ಧಾಂತದ ಮುಖ್ಯಪ್ರವರ್ತಕ ಡಚ್ ಅಪರಾಧ ಶಾಸ್ತ್ರಜ್ಞ ಡಬ್ಲ್ಯು. ಎ. ಬಾಂಗರ್. ಕ್ರಿಮಿನಾಲಜಿ ಅಂಡ್ ಎಕನಾಮಿಕ್ ಕಂಡಿಷನ್ಸ್ (ಅಪರಾಧಿತ್ವ ಮತ್ತು ಆರ್ಥಿಕ ಪರಿಸ್ಥಿತಿಗಳು) ಎಂಬ ತನ್ನ ಗ್ರಂಥದಲ್ಲಿ ಪ್ರಪಂಚದ ಎಲ್ಲ ದೇಶಗಳಿಂದಲೂ ಅಪರಾಧಿತ್ವಕ್ಕೆ ಸಂಬಂಧಿಸಿದ ಅಂಕಿಅಂಶಗಳ್ನು ಕಲೆಹಾಕಿ ಅವುಗಳ ಮೂಲಕ ಬಂಡವಾಳಗಾರಿಕೆಯ ಉಪಫಲಗಳೆನಿಸಿದ ಆರ್ಥಿಕಸ್ಪರ್ಧೆ, ದಾರಿದ್ರ್ಯ, ಮಕ್ಕಳ ಕೂಲಿಗಾರತನ, ಕೆಲಸದ ದೀರ್ಘಾವಧಿ, ವಾಸಕ್ಕೆ ಅಯೋಗ್ಯವಾದ ಮನೆ, ಕೆಲಸವಿಲ್ಲದಿರುವಿಕೆ, ಆರ್ಥಿಕ ಅಭದ್ರತೆ, ಅನಕ್ಷರತೆ-ಇವೇ ಅಪರಾಧಿತನವೆಂಬ ಪ್ರಬಲವಾದ ಸಾಮಾಜಿಕ ಸಮಸ್ಯೆಯ ಮೂಲಕಾರಣಗಳೆಂದು ತೋರಿಸಿಕೊಡಲು ಪ್ರಯತ್ನಿಸಿದ. ಸಂಶೋಧನೆಗಳ ಫಲವಾಗಿ ಬಾಂಗರ್ ಆಧುನಿಕ ಜಗತ್ತಿನಲ್ಲಿ ಅಪರಾಧಿತನದ ಮೂಲ ಬಂಡವಾಳಗಾರಿಕೆ ಪದ್ಧತಿಯಲ್ಲಡಗಿದೆ, ಅದನ್ನು ಅನುಸರಿಸಿ ಬರುವ ಕೇಡುಗಳ ಪರಿಣಾಮವಾಗಿ ಅನೀತಿವರ್ತನೆ ಮತ್ತು ಅಪರಾಧಿತನಗಳು ಪ್ರಪಂಚದಲ್ಲೆಲ್ಲ ಹರಡಿಕೊಳ್ಳುವುದು ಅನಿವಾರ್ಯವಾಗಿವೆ ಎಂಬ ಸಿದ್ಧಾಂತಕ್ಕೆ ಬಂದ.
	
ಬಾಂಗರ್ ಪರಿಶೀಲಿಸಿದ ಸಾಮಾಜಿಕ ದೋಷಗಳು ಅಪರಾಧಿತನವನ್ನೂ ದುರ್ನಡತೆಯನ್ನೂ ಪ್ರಚೋದಿಸುವ ಪರಿಸ್ಥಿತಿಗಳನ್ನು ಕಲ್ಪಿಸುತ್ತವೆ ಎಂಬುದನ್ನು ಒಪ್ಪದಿರುವ ಅಪರಾಧಶಾಸ್ತ್ರಜ್ಞರು ಬಹು ವಿರಳ. ಆದರೆ ಅವರಲ್ಲಿ ಅನೇಕರು, ಮುಖ್ಯವಾಗಿ ಮಾಕ್ರ್ಸ್ ಸಿದ್ಧಾಂತಕ್ಕೆ ಮನಗೊಡದೆ ಇರುವಂಥವರು, ಬಾಂಗರ್ ನಮೂದಿಸಿರುವ ಅನೇಕ ದೋಷಗಳು ಬಂಡವಾಳಗಾರಿಕೆಯ ಅನಿವಾರ್ಯ ಫಲವಲ್ಲ. ಅವು ನಾಗರೀಕರಣ ಮತ್ತು ಔದ್ಯೋಗೀಕರಣದ ಫಲಗಳು, ಇವೆರಡೂ ಮುಂದುವರಿದ ಕಮ್ಯೂನಿಸ್ಟ್ ದೇಶಗಳಲ್ಲೂ ಕಂಡುಬರುವ ಲಕ್ಷಣಗಳು ಎಂದು ಭಾವಿಸುತ್ತಾರೆ. ಎರಡನೆಯದಾಗಿ, ಅವರು ಬಾಂಗರ್ ಮಾಡಿದ ವ್ಯಾಖ್ಯಾನ ದೋಷರಹಿತವಾಗಿಲ್ಲವೆಂದು ಎಣಿಸುತ್ತಾರೆ. ಏಕೆಂದರೆ ದುರ್ವರ್ತನೆಯನ್ನು ಸುಲಭವಾಗಿ ಪ್ರಚೋದಿಸಬಲ್ಲ ಸನ್ನಿವೇಶವನ್ನು ಆತ ದುರ್ವರ್ತನೆಯ ಕಾರಣವೆಂದು ಭ್ರಮಿಸಿದ. ಮೇಲೆ ಹೇಳಿದ ದೋಷಗಳಿಲ್ಲದಿರುವ ಪರಿಸ್ಥಿತಿಗಿಂತಲೂ ಈ ಪರಿಸ್ಥಿತಿಯಲ್ಲಿ ಅಪರಾಧಿತನಕ್ಕೂ ಅನೀತಿವರ್ತನೆಗೂ ಸರಾಗವಾದ ಅವಕಾಶ ಸಿಕ್ಕುತ್ತದೆ ಅಷ್ಟೆ. ಇತರ ಅನೇಕ ಅಪರಾಧಶಾಸ್ತ್ರಜ್ಞರಂತೆ ಬಾಂಗರನೂ ಅಪರಾಧಿತನಕ್ಕೆ ಎಲ್ಲರಿಗೂ ಸಮರ್ಪಕವೆನಿಸುವ ಒಂದು ಸಿದ್ಧಾಂತವನ್ನು ಸ್ಥಾಪಿಸಲು ಅಸಮರ್ಥನಾದ.
	
ಮೇಲೆ ಹೇಳಿದ ಸಿದ್ಧಾಂತಗಳೆಲ್ಲ ಅಪರಾಧಿತನಕ್ಕೆ ಒಂದೇ ಒಂದು ಪ್ರಧಾನಕಾರಣವನ್ನು ಹುಡುಕಲು ಪ್ರಯತ್ನಿಸಿವೆ. ಇವುಗಳಲ್ಲಿ ಯಾವುದೊಂದೂ ಜಯಶಾಲಿಯೆನಿಸಿಲ್ಲ ಮಾನಸಿಕ ಮತ್ತು ಕಾಯಕ ದುಃಸ್ಥಿತಿಗಳಿಗಿಂತಲೂ ಹೆಚ್ಚಾಗಿ ಭಾವೋದ್ರೇಕಗಳು ಅಪರಾಧಿತನದ ಮೂಲದಲ್ಲಿವೆ ಎಂದು ತೋರಿಸುವ ಪ್ರಯತ್ನಗಳೂ ಶಂಕಾಸ್ಪದವಾದ ಸಿದ್ಧಾಂತದಲ್ಲೇ ಮುಗಿದಿವೆ. ಈ ಸಮಸ್ಯೆಯ ವಿಷಯದಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ವಾಂಸರು ಅಪರಾಧೀವರ್ತನೆಗೆ ಆರ್ಥಿಕ ಮತ್ತು ಸಾಂಸ್ಕøತಿಕ ಪರಿಸ್ಥಿತಿಗಳನ್ನು ಒಳಗೊಂಡು ಇನ್ನೂ ಅನೇಕ ಕಾರಣಗಳಿವೆ ಎಂದು ಭಾವಿಸುತ್ತಾರೆ. ಈ ಪರಿಸ್ಥಿತಿಗಳು ಸಹ ದುರ್ನಡತೆಗೆ ಸಹಾಯಕಗಳೇ ಹೊರತು ಮೂಲಕಾರಣಗಳಲ್ಲ.
	
ಇತ್ತೀಚಿನ ವರ್ಷಗಳಲ್ಲಿ ಶಾರೀರಿಕ ಅಥವಾ ಮಾನಸಿಕ ನ್ಯೂನತೆಗಳಿಗಿಂತ ಹೆಚ್ಚಾಗಿ ಸಾಮಾಜಿಕ ಪರಿಸರ ದುಷ್ಟವರ್ತನೆಯನ್ನು ಪ್ರಚೋದಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆಯೆಂದು ಅಪರಾಧಶಾಸ್ತ್ರಜ್ಞರು, ಅದರಲ್ಲೂ ಅಮೆರಿಕದವರು ಅಭಿಪ್ರಾಯಪಡುತ್ತಾರೆ. ಇವರು ಸಾಮಾಜಿಕ ಸಿದ್ಧಾಂತದ ಪಂಥಕ್ಕೆ ಸೇರಿದವರು; ಈ ಸಿದ್ಧಾಂತದ ಮುಖ್ಯಪ್ರವರ್ತಕರಲ್ಲಿ ಅಮೆರಿಕದ ಎಡ್ವಿನ್ ಎಚ್. ಸದರ್‍ಲಂಡ್ ಎಂಬಾತನೊಬ್ಬ. ಸದರ್ ಲಂಡನ ಸಿದ್ಧಾಂತಕ್ಕೆ ಆಂಶಿಕಸಾಂಗತ್ಯಸಿದ್ಧಾಂತ (ಥಿಯರಿ ಆಫ್ ಡಿಫರೆನ್ಷಿಯಲ್ ಅಸೋಸಿಯೇಷನ್) ಎಂದು ಹೆಸರು. ಈ ಸಿದ್ಧಾಂತವನ್ನು ದುರ್ವರ್ತನೆಗೆ ಅತ್ಯಂತ ಸಮರ್ಪಕವಾದ ವಿವರಣೆಗಳ ಪೈಕಿ ಒಂದೆಂದು ಅನೇಕರು ಒಪ್ಪುತ್ತಾರೆ. ಈ ಸಿದ್ಧಾಂತದ ಪ್ರಕಾರ ದುರ್ವರ್ತನೆಯನ್ನು ಯಾರಾದರೂ ಕಲಿಯಬಹುದು. ಒಬ್ಬಾತ ಅಪರಾಧಿಯಾಗುವುದೂ ಬಿಡುವುದೂ ಆತನ ಹತ್ತಿರದ ಪರಿಸರದಲ್ಲಿ ನೀತಿಯ ಅನುಸರಣೆ ಅಥವಾ ನೀತಿ ವಿರುದ್ಧವರ್ತನೆಗಳಲ್ಲಿ ಯಾವುದು ಹೆಚ್ಚಾಗಿದೆ ಎಂಬುದನ್ನು ಅವಲಂಬಿಸಿದೆ. ಅಪರಾಧೀವರ್ತನೆಯನ್ನು ವೈಜ್ಞಾನಿಕವಾಗಿ ಪರಿಶೋಧಿಸಲು ನಡೆಸಿದ ಪ್ರಯತ್ನದ ಫಲವಾಗಿ, ಅದರಲ್ಲೂ ಕಳೆದ ಐವತ್ತು ವರ್ಷಗಳಲ್ಲಿ, ಅಪರಾಧಸಮಸ್ಯೆಯ ಸ್ವಭಾವ ಮತ್ತು ವ್ಯಾಪ್ತಿಗಳ ಪ್ರಮಾಣವನ್ನು ಹಿಂದಿಗಿಂತಲೂ ಇಂದು ಹೆಚ್ಚು ನಿಷ್ಕøಷ್ಟವಾಗಿ ಅಳೆಯಲು ವಿಧಾನಗಳೂ ಸಾಧನೋಪಕರಣಗಳೂ ಲಭ್ಯವಾಗಿವೆ. ಅಪರಾಧಿತನ ಮತ್ತು ಮಕ್ಕಳ ದುರ್ನಡತೆಯ ವಿಚಾರವಾಗಿ ವ್ಯಾಸಂಗಗಳನ್ನು ನಡೆಸಲು ವಿಶ್ವಸಂಸ್ಥೆ ಆಸಕ್ತಿಹೊಂದಿದೆ; ಅದರ ಸಾಮಾಜಿಕ ವ್ಯವಹಾರಶಾಖೆ ಅಪರಾಧಿತನದ ವಿಷಯದಲ್ಲಿ ರಾಷ್ಟ್ರಗಳ ನೀತಿಯೇನೆಂಬುದನ್ನು ತನ್ನ ಅಂತರರಾಷ್ಟ್ರೀಯ ಪುನರವಲೋಕನದಲ್ಲಿ ಪ್ರಕಟಿಸುತ್ತ ಅದರಲ್ಲಿ ಪ್ರಪಂಚದ ಎಲ್ಲ ಭಾಗಗಳಲ್ಲೂ ಪ್ರಕಟವಾಗಿರುವ ಅಪರಾಧಿತನಕ್ಕೆ ಸಂಬಂಧಿಸಿದ ಗ್ರಂಥಗಳ ಪಟ್ಟಿಯನ್ನು ಕೊಡುತ್ತದೆ. ಇದರಿಂದ ಅಪರಾಧಗಳ ವಿಷಯದಲ್ಲಿ ಸರ್ಕಾರಗಳೆಲ್ಲ ಎಷ್ಟು ಆಸಕ್ತಿಯನ್ನು ತಾಳಿವೆ ಎಂಬುದು ಗೊತ್ತಾಗುತ್ತದೆ. ಈ ತೆರದ ವಿಚಾರಸಂಗ್ರಹದಿಂದ ಅಪರಾಧಶಾಸ್ತ್ರಜ್ಞರೆಲ್ಲರೂ-ಅವರು ಯಾವುದೇ ರಾಜ್ಯದಲ್ಲಿರಲಿ-ಈ ವ್ಯಾಸಂಗದಲ್ಲಿ ಪರಸ್ಪರ ಸಹಕರಿಸಲು ಅನುಕೂಲವಾಗಿದೆ; ಅದರ ಪರಿಣಾಮವಾಗಿ ಅಪರಾಧಶಾಸ್ತ್ರ ಕ್ಷೇತ್ರದಲ್ಲಿ ಕಂಡುಹಿಡಿಯಲಾದ ಮುಖ್ಯವಿಷಯಗಳೆಲ್ಲ ವಿದ್ವಾಂಸರ ತಿಳಿವಳಿಕೆಗೆ ಬರುವಂತಾಗಿದೆ, ಇಂಥದೇ ಸೇವೆಯನ್ನು ಹಾಲೆಂಡಿನಲ್ಲಿ ಪ್ರಕಟವಾಗುವ ಎಕ್ಸಪ್ರ್ಟಿಕಾ ಕ್ರಿಮಿನೋಲಾಜಿಕ (ಅಪರಾಧಶಾಸ್ತ್ರ ವ್ಯಾಸಂಗದಲ್ಲಿನ ಉದ್ಧøತ ವಿಷಯಗಳು) ಎಂಬುದು ನೆರವೇರಿಸುತ್ತಿದೆ. ಇದು ಗ್ರಂಥಗಳ ಪಟ್ಟಿಯನ್ನು ಕೊಡುವುದಲ್ಲದೆ ಅಪರಾಧಶಾಸ್ತ್ರ ವ್ಯಾಸಂಗದಲ್ಲಿ ಕಂಡುಹಿಡಿಯಲಾದ ಪ್ರಧಾನಾಂಶಗಳ ಸಾರಾಂಶವನ್ನೂ ಎತ್ತಿಕೊಡುತ್ತದೆ.
	
ಅನೀತಿವರ್ತನೆಯ ಮೂಲಕಾರಣ ಅಥವಾ ಕಾರಣಗಳನ್ನು ನಿಷ್ಕøಷ್ಟವಾಗಿ ಇನ್ನೂ ಕಂಡುಹಿಡಿದಿಲ್ಲವಾದರೂ ಇತ್ತೀಚಿನ ವರ್ಷಗಳಲ್ಲಿ ಅಪರಾಧಶಾಸ್ತ್ರಜ್ಞರು ಗಮನಾರ್ಹವಾದ ಸಮೀಕ್ಷಣೆಗಳನ್ನು ನಡೆಸಿದ್ದಾರೆ; ಅಪರಾಧ ಮತ್ತು ಅಪರಾಧಿತನಗಳ ವಿಷಯದಲ್ಲಿ ವಿಪುಲವಾದ ಜ್ಞಾನರಾಶಿಯನ್ನು ಸಂಗ್ರಹಿಸಿದ್ದಾರೆ. ಈ ತಿಳಿವಳಿಕೆಯನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದೇ ಆದರೆ, ಈಗ ಪ್ರಪಂಚದಲ್ಲೆಲ್ಲ ಹಬ್ಬುತ್ತಿರುವ ಮತ್ತು ಪ್ರತಿಯೊಂದು ಆಧುನಿಕ ಸಮಾಜದ ತೀವ್ರಗಮನವನ್ನು ತನ್ನೆಡೆಗೆ ಸೆಳೆಯುತ್ತಿರುವ ಅಪರಾಧಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಅನುಕೂಲವಾಗುತ್ತದೆ.
(ನೋಡಿ- ಅಪರಾಧಮನಶ್ಯಾಸ್ತ್ರ) 
(ನೋಡಿ- ಬಾಲಾಪರಾಧ)										
(ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ